Programs/Events

ವಿವಿಧ ತರಕಾರಿ ಬೇಸಾಯದ ಶ್ರಮಜೀವಿಗಳನ್ನು ಬೇಟಿ ಮಾಡುವ ಕಾರ್ಯಕ್ರಮ

ವಿವಿಧ ತರಕಾರಿ ಬೇಸಾಯದ ಶ್ರಮಜೀವಿಗಳನ್ನು ಬೇಟಿ ಮಾಡುವ ಕಾರ್ಯಕ್ರಮ

26 January 2026

ವಿವಿಧ ತರಕಾರಿ ಬೇಸಾಯದ ಶ್ರಮಜೀವಿಗಳನ್ನು ಭೇಟಿ ಮಾಡುವ ಕಾರ್ಯಕ್ರಮ

ಸ್ಥಳಗಳು #

1) ಡಾ,ಜಯಕುಮಾರ್, S D M ನಿವೃತ ಪ್ರಾಂಶುಪಾಲರು ಉಜಿರೆ, ತಾರಸಿ ಕೃಷಿ ಸಾಧಕರು

2) ಶ್ರೀ ಶಿವಪ್ರಸಾದ್ ಮಲೆಬೆಟ್ಟು ಉಜಿರೆ, ಸಮಗ್ರ ತರಕಾರಿ ಕೃಷಿಕರು

3) ಶ್ರೀ ಪ್ರಕಾಶ್ ಜೋಷಿ, ನಾರಾವಿ - ಸಮಗ್ರ ಕೃಷಿಕ, ಜೇನು ಪಂಡಿತ, ಜ್ಯೋತಿಷಿ

4) ಗೋಪಾಲ ಕೃಷ್ಣ ಭಟ್ ವೇಣೂರು, ಗೋ ಆಧಾರಿತ ಕೃಷಿಕ, ನೀರಾವರಿ ತಜ್ಞ

ಸಾವಯವ ಕೃ಼ಷಿಕ ಗ್ರಾಹಕ ಬಳಗದ ಜನವರಿ 26 ರ ಪ್ರವಾಸ ಕೃಷಿಕನಲ್ಲದ ನನಗೂ ಕೃಷಿಯ ಪ್ರೇರಣೆ ನೀಡಿದ್ದು ನಿಜ. ವಿಷಯುಕ್ತ ಆಹಾರವನ್ನೇ ಉಪಾಯವಿಲ್ಲದೆ ಸೇವಿಸುತ್ತಿದ್ದ ನಮಗೆ ವಿಷಮುಕ್ತ ಆಹಾರವನ್ನು ಸಣ್ಣ ಜಾಗದಲ್ಲೂ ತಾರಸಿಯಲ್ಲಿಯೂ ಹೇಗೆ ಬೆಳೆಯಬಹುದು ಎನ್ನುವುದನ್ನು ಈ ಪ್ರವಾಸ ತೋರಿಸಿಕೊಟ್ಟಿತು.

ಪ್ರವಾಸದ ಮೊದಲ ಭೇಟಿ ಉಜಿರೆಯ ಡಾ. ಜಯಕುಮಾರ್ ದಂಪತಿಗಳ ಮನೆ 'ಶ್ರೀಧರ್ಮ'. ಅದೊಂದು ಸಸ್ಯಕಾಶಿ. ನೋಡಿದಲ್ಲೆಲ್ಲ ಅಂದವಾಗಿ ಜೋಡಿಸಿಟ್ಟ ಚಂದದ ಗಿಡಗಳು. ಅವರು ನಮ್ಮನ್ನು ಸತ್ಕರಿಸಿದ ಮತ್ತು ನಮ್ಮನ್ನು ಅವರ ಮನೆಗೆ ಆಹ್ವಾನಿಸಿದ ರೀತಿ ಅವರ ಸಹೃದಯತೆಯನ್ನು ತೋರಿಸಿತ್ತು. ಬೇಕಿದ್ದವರಿಗೆ ಗಿಡಗಳನ್ನು ಕಳುಹಿಸಿಕೊಡುತ್ತೇನೆ ಎಂಬ ಅವರ ಮಾತು ಅವರ ಮನದಾಳದಿಂದಲೇ ಬಂದಿತ್ತು. ಸವಿಯಾದ ಉಪಾಹಾರದ ಜೊತೆಗೆ ಅವರ ಶ್ರೀಮತಿಯವರು ತಯಾರಿಸಿದ ಶಂಖಪುಷ್ಪದ ಚಿತ್ರಾನ್ನ ನಮ್ಮಲ್ಲಿನ ಅನೇಕರಿಗೆ ಹೊಸರುಚಿಯ ವಿಶೇಷವಾಗಿತ್ತು. ದಂಪತಿಗಳ ಹವ್ಯಾಸ made for each other.

ನಂತರದ ಭೇಟಿ ಯೂಟ್ಯೂಬ್ ಕಿಂಗ್ ಶಿವಪ್ರಸಾದ್ ಮಲೆಬೆಟ್ಟು ಅವರ ಫಾರ್ಮ್ ಹೌಸ್. ಒಂದು ಸಣ್ಣ ಸ್ಥಳದಲ್ಲಿ ಹಲವಾರು ಸಸ್ಯಗಳು ಹೇಗೆ ಸಹಜವಾಗಿ ಮತ್ತು ಪರಸ್ಪರ ಪೂರಕವಾಗಿ ಬೆಳೆಯುತ್ತವೆ ಎಂಬುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ಅವರು ತಿಳಿಸಿಕೊಟ್ಟರು. ಊಟಕ್ಕೆ ಸಾವಯವ ಅಕ್ಕಿಯಲ್ಲಿ ತಯಾರಿಸಿದ ಕುಚ್ಚಲಕ್ಕಿ ಅನ್ನ, ಮನೆಯಲ್ಲೇ ಬೆಳೆದ ತರಕಾರಿಯಿಂದ ತಯಾರಿಸಿದ ಸಾಂಬಾರು, ನಗುನಗುತ್ತಾ ಬಡಿಸಿದ ಮನೆಯವರ ಮತ್ತು ಮಕ್ಕಳ ಪ್ರೀತಿಯಿಂದಾಗಿ ಯಾವಾಗಕ್ಕಿಂತಲೂ ಸ್ವಲ್ಪ ಹೆಚ್ಚೇ ಊಟ ಉದರ ಸೇರಿತ್ತು. ಶಿವಪ್ರಸಾದ್ ನೀಡಿದ ಬೀಜಗಳು ಮತ್ತು ಗಿಡಗಳು ನಮ್ಮಲ್ಲಿ ಬೆಳೆದಾಗ ಆಗಾಗ ಅವರ ನೆನಪು ಆಗಲಿಕ್ಕೆ ಇದೆ.

ಮುಂದೆ ಸಾಗಿದ್ದು ಜೇನುಪಂಡಿತ ಹರೀಶ್ ಜೋಶಿಯವರ ಮನೆಗೆ.ಯಥಾಪ್ರಕಾರ ಸಸ್ಯಸಂಪತ್ತನ್ನು ವೃದ್ಧಿಸುವ ಬಗ್ಗೆ, ಮುಖ್ಯವಾಗಿ ಪಾಲಿನೇಶನ್ ಮಾಡುವ ಬಗ್ಗೆ, ಅವರ ಪ್ರತಿಭೆ ನಮ್ಮೆದುರು ಅನಾವರಣಗೊಂಡಿತು. ಖಗೋಲ ಶಾಸ್ತ್ರದ ಬಗೆಗಿನ ಅವರ ತಿಳುವಳಿಕೆ ವಿಶ್ವವಿದ್ಯಾಲಯದ ಮಟ್ಟದಲ್ಲಿ ಪಾಠ ಮಾಡುವ ವಿದ್ವಾಂಸರ ರೀತಿಯಲ್ಲಿತ್ತು. ಶಾಲಾಕಾಲೇಜುಗಳು ಅವರ ಪಾಂಡಿತ್ಯವನ್ನು ಉಪಯೋಗಿಸಿದರೆ ಒಳ್ಳೆಯದಿತ್ತು.

ಕೊನೆಯದಾಗಿ ನಾವು ಭೇಟಿ ನೀಡಿದ್ದು ನೀರಾವರಿ ತಜ್ಞ ಗೋಪಾಲಕೃಷ್ಣ ಭಟ್ಟರ ಮನೆಗೆ. ಇರುವ ನೀರನ್ನು ಹೇಗೆ ಜಾಣ್ಮೆಯಿಂದ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಅವರೇ ಮಾದರಿ. ಗೋಆಧಾರಿತ ಕೃಷಿ ನಾಶವಾದರೆ ಜಗತ್ತೇ ನಾಶವಾಗುತ್ತದೆ ಎನ್ನುವುದು ಅವರ ಖಚಿತ ಅಭಿಪ್ರಾಯ. ಜೀವನ ಮೌಲ್ಯದ ಬಗ್ಗೆ ಗಂಟೆಗಟ್ಟಲೆ ಮಾತಾಡಬಲ್ಲ ಅವರಿಗೆ ನಮ್ಮ ಸಮಯದ ಮಿತಿ ಸ್ವಲ್ಪ ನಿರಾಶೆಗೊಳಿಸಿರಬಹುದು.

ಹೀಗೆ ನಾಲ್ಕು ಕಡೆಗಳಲ್ಲೂ ನಾವು ಬಯಸಿದ್ದಕ್ಕಿಂತಲೂ ಹೆಚ್ಚಿನ ಜ್ಞಾನ ನಮಗೆ ಪ್ರಾಪ್ತವಾಯಿತು ಎನ್ನುವುದು ನನ್ನ ಭಾವನೆ. ಶಿವಪ್ರಸಾದ್ ನಮ್ಮ ಜೊತೆ ನಾಲ್ಕು ಕಡೆಗಳಲ್ಲೂ ಉಪಸ್ಥಿತರಿದ್ದದ್ದು ವಿಶೇಷ. ರತ್ನಾಕರ ಕುಳಾಯಿಯವರ ಶಿಸ್ತು, ಯಥೋಚಿತ ಮಾತುಗಳು, ಇತರ ಪದಾಧಿಕಾರಿಗಳ ಸಹಕಾರ ಇವುಗಳಿಂದಾಗಿ ಪ್ರವಾಸ ಸುಗಮವಾಗಿ ನಡೆಯಿತು ಎನ್ನಲು ಸಂತೋಷವಾಗುತ್ತದೆ. ನಾಲ್ವರು ಕೃಷಿಕರಿಗೆ ಬಳಗ ನೀಡಿದ ಸಾವಯವ ಅಕ್ಕಿ, ಬೆಲ್ಲ, ಸ್ಮರಣಿಕೆಗಳ ಗೌರವ ಅಭಿನಂದನೀಯ.

ಪಿಕಪ್ ಪ್ರಯಾಣದ ಖುಷಿ ನಮ್ಮಲ್ಲಿ ಕೆಲವರಿಗೆ ಸಿಕ್ಕಿದ ಬೋನಸ್ 😊