Programs/Events

ಎಲೆ ಅರಿವು ಕಾರ್ಯಕ್ರಮ

ಎಲೆ ಅರಿವು ಕಾರ್ಯಕ್ರಮ

10 November 2024

ದಿನಾಂಕ: ನವೆಂಬರ್ 10 ಭಾನುವಾರ
ಸಮಯ: ಬೆಳಿಗ್ಗೆ 9:30 ರಿಂದ ಮದ್ಯಾನ 1 ರ ತನಕ
ಸ್ಥಳ: ನಂತೂರು ಶ್ರೀಭಾರತೀ ಸಭಾಭವನ

ಎಲೆ ಅರಿವು ಕಾರ್ಯಾಗಾರ

"ಸುತ್ತಿಬಿಡು ಹಿತ್ತಿಲಲಿ ಮುಂಜಾವ ಹೊತ್ತಿನಲಿ ತರಬೇಕು ತಂಬುಳಿಗೆ ಹತ್ತಾರು ಬೇರು ನಾರು ... " ಎಂಬ ಹಾಡನ್ನು ಹಾಡುತ್ತಾ, ಸಾವಯವ ಕೃಷಿಕ ಗ್ರಾಹಕ ಬಳಗ - ಮಂಗಳೂರು ಇವರು ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಪಾರ್ವತಿ ದೇವಿ ದೈಗೋಳಿ ಅವರು, ಸಸ್ಯ ಸಂಪತ್ತಿನ ಗುಣವಿಶೇಷಗಳನ್ನು ವಿವರಿಸುತ್ತಾ ಸಭಿಕರ ಗಮನಸೆಳೆದರು.

ಗಿಡಮೂಲಿಕೆಗಳು ಮತ್ತು ಜೀವಜಾಲಗಳ ಅವಿನಾಭಾವ ಸಂಬಂಧವನ್ನು, ಸಸ್ಯಗಳ ಮಹತ್ವವನ್ನು, ಅಳಿವಿನ ಅಂಚಿನಲ್ಲಿರುವ ಸಸ್ಯಗಳ ರಕ್ಷಣೆಯ ಅಗತ್ಯವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಉದಯಕುಮಾರ್ ಶೆಟ್ಟಿ ಪಿಲಿಕುಳ, ಅವರು ಸ್ಪಷ್ಟಪಡಿಸಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪಾರ್ವತಿ ಭಟ್ ಏತಡ್ಕ ಅವರು, ಒಂದಷ್ಟು ಸಸ್ಯಗಳು ನಮ್ಮ ನಿತ್ಯ ಬದುಕಿನಲ್ಲಿ ಹೇಗೆ ಪ್ರಯೋಜನಕಾರಿಯಾಗಿವೆ, ಅವುಗಳ ಬಳಕೆ ಹೇಗೆ ಎಂದು ವಿವರಣೆಯನ್ನು ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಡಾ. ಶ್ರೀ. ಕೇಶವ ರಾಜ್ ಅವರು ಎಲೆ ಅರಿವು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಾವಯವ ಬಳಗದ ಕಾರ್ಯದರ್ಶಿ ಶ್ರೀ ರತ್ನಾಕರ ಕುಳಾಯಿ ಅವರು, ಬಳಗದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸುತ್ತಾ, ಎಲೆ ಅರಿವು ಕಾರ್ಯಾಗಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಜಯಶ್ರೀ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ದಾಕ್ಷಾಯಿಣಿ ವಂದನಾರ್ಪಣೆಗೈದರು.

* * *

ತರಕಾರಿ, ಆಹಾರ ಹಾಗೂ ಔಷಧಿ ರೂಪದಲ್ಲಿ ಬಳಸುವ ಒಂದಷ್ಟು ಗಿಡ ಮೂಲಿಕೆಗಳ ಪ್ರದರ್ಶನವನ್ನು ಎಲೆ ಅರಿವಿನ ಅಂಗವಾಗಿ ಅಣಿಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಕುಮಾರಿಯರಾದ ದೇವಿಕಾ ಮತ್ತು ..... ಪುತ್ತೂರು ಅವರು,ಪ್ರಕೃತಿ ಗೀತೆಯನ್ನು ಹಾಡಿ ಶಿಬಿರಾರ್ಥಿಗಳಲ್ಲಿ ಚುರುಕು ಮೂಡಿಸಿದರು. ಜೊತೆಗೆ, ಆಹಾರವಾಗಿ ಬಳಕೆಯಾಗುವ ಸಸ್ಯಗಳು ಮತ್ತು ಅವುಗಳ ಔಷಧೀಯ ಗುಣ, ಗಿಡ ಮೂಲಿಕೆಗಳ ವೈಜ್ಞಾನಿಕ ಹೆಸರು ಮತ್ತು ಪ್ರಾದೇಶಿಕ ಹೆಸರುಗಳನ್ನು ಮನವರಿಕೆ ಮಾಡಿಕೊಟ್ಟು ಕಾರ್ಯಾಗಾರವನ್ನು ಅರ್ಥಪೂರ್ಣಗೊಳಿಸಿದರು. ಶಿಬಿರಾರ್ಥಿಗಳ ಸಂಶಯ ಮತ್ತು ಪ್ರಶ್ನೆಗಳಿಗೆ ಶ್ರೀ ಉದಯಕುಮಾರ್ ಶೆಟ್ಟಿ ಪಿಲಿಕುಳ ಅವರು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಕುಮಾರಿ ಮಂಜುಳ ಮತ್ತು ಕುಮಾರಿ ದೇವಿಕಾ ಸಾಮನ್ಯವಾಗಿ ನಮ್ಮ ಮನೆಯ ಸುತ್ತಮುತ್ತ ಬೆಳೆದ ಹಲವಾರು ಗಿಡಗಳ ಪರಿಚಯ ಅದ್ಬುತವಾಗಿತ್ತು. ತಮ್ಮ ಸುತ್ತು ಮುತ್ತಲಿನಲ್ಲಿ ಲಭ್ಯವಿರುವ ಮತ್ತು ಪರಿಚಿತವಾದ ಗಿಡಗಳೊಂದಿಗೆ ಹಾಜರಾದ ಶಿಬಿರಾರ್ಥಿಗಳು, ವಿವಿಧ ಸೊಪ್ಪುಗಳಿಂದ ತಯಾರಿಸಿದ ಚಟ್ನಿ, ತಂಬುಳಿ, ಪದಾರ್ಥ ಹಾಗೂ ತಿನಿಸುಗಳನ್ನು ಪರಸ್ಪರ ಹಂಚುವ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಎಲೆ ಅರಿವು ಕಾರ್ಯಾಗಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿಬಿರಾರ್ಥಿಗಳು, 2025 ಜನವರಿ 4 ಮತ್ತು 5ನೇ ತಾರೀಕುಗಳಂದು ಮಂಗಳೂರಿನಲ್ಲಿ ನಡೆಯಲಿರುವ ಗೆಡ್ಡೆಗೆಣಸು ಮತ್ತು ಸೊಪ್ಪು ಮೇಳದಲ್ಲಿ, ಸಸ್ಯ ಮೂಲಿಕೆಗಳ ಪರಿಚಯವನ್ನು ಸಾರ್ವಜನಿಕರಿಗೆ ನೀಡುವಲ್ಲಿ ವಿಶೇಷ ಕಾರ್ಯಕ್ರಮದ ಯೋಜನೆಯ ಭರವಸೆಯನ್ನು ನೀಡಿ ಯೋಜಿತ ಮೇಳಕ್ಕೆ ಬೆಂಬಲ ವ್ಯಕ್ತಪಡಿಸಿದರು. ವಿವಿಧ ಬಗೆಯ ಸೊಪ್ಪುಗಳ ತಂಬುಳಿ, ಚಟ್ನಿ, ತಿನಿಸು ಯುಕ್ತವಾದ ಮಧ್ಯಾಹ್ನದ ಸುಗ್ರಾಸ ರಸದೌತಣದೊಂದಿಗೆ ಎಲೆ ಅರಿವು ಕಾರ್ಯಾಗಾರವು ಸಂಪನ್ನಗೊಂಡಿತು.